ಪರಿಷ್ಕರಿಸಿದ ದಿನಾಂಕ ೨೦ನೇ ಮೇ ೨೦೨೧
ವಿಶ್ವ ಅರೋಗ್ಯ ಸಂಸ್ಥೆಯು ಮಾರ್ಚ್ 11, 2020ರಂದು ಕೋವಿಡ್19ನ್ನು (ನೋವಲ್ ಕೊರೊನ ವೈರಸ್) ಪಿಡುಗೆಂದು ಘೋಷಿಸಿತು. ವಿಶ್ವದಾದ್ಯಂತ ಪರಿಸ್ಥಿಯು ಬದಲಾಗುತ್ತಿದ್ದು, ಕೋವಿಡ್19ರ ಹೊಸ ಪ್ರಭೇಧಗಳು ಕಂಡುಬಂದಿರುವ ಆಧಾರದ ಮೇರೆಗೆ ಮತ್ತು ಲಸಿಕಾಕರಣ ಹೆಚ್ಚುತ್ತಿರಲು ಅನೇಕ ರಾಷ್ಟ್ರಗಳು ಪ್ರವಾಸ ಮತ್ತು ಸುರಕ್ಷತೆಗೆ ಸಂಬಂಧಿಸಿದ ಕ್ರಮಗಳನ್ನು ಒಂದೇ ಕಠಿಣಗೊಳಿಸುತ್ತಿದ್ದಾರೆ ಅಥವಾ ಕಡಿಮೆಗೊಳಿಸುತ್ತಿದ್ದರೆ ಎಂದು ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ವಿಶ್ವಾದ್ಯಂತ ಈ ವೈರಸ್ ಬಗ್ಗೆ ಮತ್ತು ಅದರ ವಿರುದ್ಧ ಸರ್ಕಾರಗಳು ನಡೆಸುತ್ತಿರುವ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವಲ್ಲಿ ಪತ್ರಕರ್ತರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸಿಪಿಜೆ ಪ್ರಕಾರ ಅನೇಕ ದೇಶಗಳ ಸರ್ಕಾರಗಳು ಇಂತಹ ಸ್ವತಂತ್ರ ವರದಿಗಾರರ ಮೇಲೆ ಹಾಗು ಸುಲಭವಾಗಿ ಲಭಿಸುತ್ತಿರುವ ಮಾಹಿತಿಯ ಮೇಲೆ ಕಡಿವಾಣ ಹಾಕಲು ಪ್ರಯತ್ನಿಸುತ್ತಿವೆ. ಮಾಧ್ಯಮ ಸಿಬ್ಬಂದಿಗಳು ಬಹಳಷ್ಟು ತೊಂದರೆ ಹಾಗು ಒತ್ತಡವನ್ನು ಎದುರಿಸುತ್ತಿದ್ದು, ಹಲವಾರು ಬಾರಿ ಪ್ರಯಾಣಿಸುವಾಗ, ಸಂದರ್ಶಿಸುವಾಗ ಮತ್ತು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುವಾಗ ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂದು ಪತ್ರಕರ್ತರು ಸಿಪಿಜೆಗೆ ನೀಡಿರುವ ಸಂದರ್ಶನದಿಂದ ತಿಳಿದುಬಂದಿದೆ. ಪತ್ರಕರ್ತರು ಸೆನ್ಸಾರ್ಶಿಪ್, ಬಂಧನ, ದೈಹಿಕ ಮತ್ತು ಆನ್‌ಲೈನ್ ಕಿರುಕುಳ ಮತ್ತು ಕೋವಿಡ್19ರ ಕಾರಣದಿಂದಾಗಿ ತಮ್ಮ ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ ಎಂದು ಈತ್ತಿಚೆಗಿನ ಸಿಪಿಜೆ ವರದಿಯಲ್ಲಿ ಗುರುತಿಸಲಾಗಿದೆ.
ವ್ಯಾಧಿಗೆ ಸಂಬಂಧಪಟ್ಟ ವರದಿಯನ್ನು ತಯಾರಿಸುತ್ತಿರುವ ಪತ್ರಕರ್ತರು ಹೊಸ ಸಲಹೆ ಮತ್ತು ನಿರ್ಬಂಧನೆಗಳ ಬಗ್ಗೆ ತಿಳಿದುಕೊಳ್ಳಲು ವಿಶ್ವ ಅರೋಗ್ಯ ಸಂಸ್ಥೆ ಮತ್ತು ಸ್ಥಳೀಯ ಸಾರ್ವಜನಿಕ ಅರೋಗ್ಯ ಕೇಂದ್ರದ ಮಾಹಿತಿಯನ್ನು ಅನುಸರಿಸಬೇಕು. ಕೋವಿಡ್-19 ವ್ಯಾಧಿಯ ಯಾವುದೇ ಬೆಳವಣಿಗೆಯ ಬಗ್ಗೆ ತಿಳಿದುಕೊಳ್ಳಲು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಕೊರೋನ ವೈರಾಣು ಮಾಹಿತಿ ಕೇಂದ್ರವು ವಿಶ್ವಾಸಾರ್ಹ ಮತ್ತು ಸುರಕ್ಷಿತ ಸಂಪನ್ಮೂಲವಾಗಿದೆ.
ಕೆಲಸ ನಿರ್ವಹಿಸುತ್ತಿರುವ ಸ್ಥಳದಲ್ಲಿ ಸುರಕ್ಷತೆ
ಅಂತಾರಾಷ್ಟ್ರೀಯ ಪ್ರಯಾಣದ ಮೇಲಿನ ನಿರ್ಬಂಧನೆಗಳು ಹಾಗು ಸುರಕ್ಷತಾ ಕ್ರಮಗಳು ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತವೆ. ಇದರರ್ಥ, ಪೂರ್ವ ನಿಯೋಜಿತ ಕೆಲಸವು ಅಲ್ಪ ಸೂಚನೆಯೊಂದಿಗೆ ಅಥವಾ ಯಾವುದೇ ಸೂಚನೆಗಳು ಇಲ್ಲದೆ ರದ್ದುಗೊಳ್ಳಬಹುದು.
ಅಮೆರಿಕಾದ ರೋಗ ನಿಯಂತ್ರಣ ಕೇಂದ್ರದ ಪ್ರಕಾರ, ಪ್ರತ್ರಿಕಾ ರಂಗದಲ್ಲಿ ಇರುವವರು ಗಮನ ನೀಡಬೇಕಾದ ವಿಷಯವೆಂದರೆ, ಲಸಿಕೆಯನ್ನು ಪಡೆದವರು ಸಹ ವೈರಾಣುವನ್ನು ಪ್ರಸರಿಸುವ ಸಾಧ್ಯತೆಗಳು ಇವೆ. ಯೇಲ್ ವೈದ್ಯಕೀಯ ವಿಭಾಗವು ತಿಳಿಸಿರುವಂತೆ, ವಿವಿಧ ಬಗೆಯ ಲಸಿಕೆಗಳು ವೈರಾಣುವಿನ ಬೇರೆ ಬೇರೆ ಪ್ರಭೇದಗಳ ವಿರುದ್ಧ ಪರಿಣಾಮಕಾರಿಯಾಗಿವೆ. ಹಾಗಾಗಿ, ಕೋವಿಡ್-19ನ್ನು ತಡೆಗಟ್ಟಲು ಚಾಲ್ತಿಯಲ್ಲಿರುವ ಸುರಕ್ಷತಾ ಕ್ರಮಗಳಾದ ದೈಹಿಕ ಅಂತರವನ್ನು ಪಾಲಿಸುವುದು ಮತ್ತು ಮಾಸ್ಕ್/ಮುಖವಾಡ ಧರಿಸುವುದು ಅಗತ್ಯವಾಗಿದೆ.
ಕೋವಿಡ್-19 ಸಾಂಕ್ರಾಮಿಕದ ವರದಿಗಾರಿಕೆಗೆ ಯೋಚಿಸುತ್ತಿರುವವರು ಈ ಕೆಳಗಿನ ಸುರಕ್ಷಾ ಮಾಹಿತಿಗಳನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ.
ನಿಯೋಜನೆಗೆ ಮುಂಚಿತವಾಗಿ
- ಯಾವುದೇ ನಿಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮುನ್ನ, ಕೋವಿಡ್-19 ಲಸಿಕೆಗಳು ಲಭ್ಯವಿದ್ದು ನೀವು ಅದನ್ನು ತೆಗೆದುಳ್ಳುವುದು ಸುರಕ್ಷಿತವೆಂದಾದರೆ ಲಸಿಕೆಯನ್ನು ಪಡೆಯಿರಿ. ವಿಶೇಷವಾಗಿ, ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಹರಡಿರುವ ಪ್ರದೇಶಗಳಿಗೆ ಪ್ರಯಾಣಿಸುವ ಮುನ್ನ ಲಸಿಕೆಯನ್ನು ಪಡೆಯಿರಿ.
- ನೀವು ಪ್ರಯಾಣಿಸಲಿರುವ ಪ್ರದೇಶದಲ್ಲಿ ಇರುವ ಸೋಂಕಿನ ಪ್ರಮಾಣವನ್ನು ಆಧರಿಸಿ , ಫೋನ್ ಅಥವಾ ಆನ್ಲೈನ್ ಸಂದರ್ಶನಗಳನ್ನು ನಡೆಸಬೇಕು. ರೋಗ ಹರಡುವುದನ್ನು ತಡೆಗಟ್ಟಲು ಈ ಕ್ರಮವನ್ನು ಅನುಸರಿಸುವುದು ಅಗತ್ಯಕರ.
- ಅಮೆರಿಕದ ಸಿಡಿಸಿಯ ಪ್ರಕಾರ, ಹಿರಿಯ ನಾಗರಿಕರು ಮತ್ತು ಮಧುಮೇಹ ಅಥವಾ ಸ್ಥೂಲಕಾಯದಂತಹ ಆರೋಗ್ಯ ಸಮಸ್ಯೆ ಇರುವವಿಗೆ ಅಪಾಯ ಸಾಧ್ಯತೆ ಅಧಿಕ. ಈ ವರ್ಗದಲ್ಲಿ ನೀವು ಸೇರುತ್ತೀರಿ ಎಂದಾದಲ್ಲಿ, ಮತ್ತು ಸೋಂಕಿನ ಪ್ರಮಾಣವನ್ನು ಆಧರಿಸಿ, ನೀವು ಖುದ್ದಾಗಿ ಪಾಲ್ಗೊಳ್ಳುವುದನ್ನು ತಡೆಯಬೇಕು. ಗರ್ಭಿಣಿಯಾಗಿರುವ ಉದ್ಯೋಗಿಗಳಿಗೆ ಕೂಡಾ ಈ ಅಂಶವನ್ನು ಪರಿಗಣಿಸುವಂತೆ ಸಲಹೆ ಮಾಡಬೇಕು.
- ಕೋವಿಡ್-19 ಸಾಂಕ್ರಾಮಿಕದ ಬಗೆಗಿನ ವರದಿಗಾರಿಕೆಗೆ ಸಿಬ್ಬಂದಿಯನ್ನು ಆಯ್ಕೆ ಮಾಡುವಾಗ, ನ್ಯೂ ಯಾರ್ಕ್ ಟೈಮ್ಸ್ ನೀಡಿದ ಸಂದೇಶದಂತೆ ಕೆಲ ದೇಶದ ಪ್ರಜೆಗಳ ವಿರುದ್ಧ ಜನಾಂಗೀಯ ದಾಳಿಗಳು ನಡೆಯುವುದನ್ನು ಆಡಳಿತ ಮಂಡಳಿಗಳು ಗಮನದಲ್ಲಿಟ್ಟುಕೊಳ್ಳಬೇಕು.
- ವಿಶ್ವದಾದ್ಯಂತ ಪ್ರಯಾಣದ ಮೇಲಿನ ನಿರ್ಬಂಧನಗಳು ಅಥವಾ ಲೊಕ್ಡೌನ್ ಸೂಚಿಗಳು ಯಾವುದೇ ಮುನ್ಸೂಚನೆಯಿಲ್ಲದೆ ಜಾರಿಗೆ ಬರಬಹುದು.ನೀವು ಕರ್ತವ್ಯಕ್ಕೆ ನಿಯೋಜಿತರಾದ ಅವಧಿಯಲ್ಲಿ ಅಸ್ವಸ್ಥರಾದರೆ, ಯಾವ ಬಗೆಯ ನೆರವು ಹಾಗೂ ಬೆಂಬಲವನ್ನು ಆಡಳಿತ ಮಂಡಳಿ ಒದಗಿಸುತ್ತದೆ ಎಂಬ ಬಗ್ಗೆ ಚರ್ಚಿಸಿ. ಸ್ವಯಂ ಪ್ರತ್ಯೇಕತೆ ಅಥವಾ ಕ್ವಾರಂಟೈನ್/ಲಾಕ್‍ಡೌನ್ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಳ್ಳಬಹುದಾದ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಿ.
ಮಾನಸಿಕ ಸುಸ್ಥಿತಿ
ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ರಿಯೂಟರ್ಸ್ ಸಂಸ್ಥೆಯ ಪ್ರಕಾರ, ಕೋವಿಡ್ 19 ಪಿಡುಗಿನ ಬಗ್ಗೆ ವರದಿ ಮಾಡುವಾಗ ನುರಿತ ಪತ್ರಕರ್ತರು ಕೂಡ ಮಾನಸಿಕ ಅಡಚಣೆಗಳನ್ನು ಕಾಣುವ ಸಂಭವವಿದೆ. ಪತ್ರಕರ್ತರನ್ನು ನಿರ್ವಹಿಸುವ ಸಂಸ್ಥೆಗಳು ಸಮಯಕೆ ತಕ್ಕಂತೆ ಅವರವರ ಸಿಬ್ಬಂದಿಗಳ ಮೇಲ್ವಿಚಾರಣೆ ನಡೆಸಿ, ಅವರ ಮಾನಸಿಕ ಆರೋಗ್ಯದ ಮೇಲೆ ನಿಗಾ ಇಡಬೇಕು. ಅವರಿಗೆ ಯಾವುದೇ ರೀತಿಯ ಸಹಾಯ ಬೇಕಿದ್ದಲ್ಲಿ, ಅದನ್ನು ತ್ವರಿತ ರೀತಿಯಲ್ಲಿ ಒದಗಿಸಬೇಕು.
ಕೋವಿಡ್-19 ಸಾಂಕ್ರಾಮಿಕ ಹರಡಿದ ಜಾಗದಿಂದ ವರದಿ ಮಾಡುವ ಹಾಗು ಲಾಕ್‍ಡೌನ್ ವೇಳೆ ಸಂಭಾವ್ಯ ಮಾನಸಿಕ ಪರಿಣಾಮವನ್ನು ಪರಿಗಣನೆಗೆ ತೆಗೆದುಕೊಳ್ಳಿ. ಅದರಲ್ಲೂ ಮುಖ್ಯವಾಗಿ ವೈದ್ಯಕೀಯ ಅಥವಾ ಐಸೊಲೇಶನ್ ಕೇಂದ್ರಗಳಿಂದ, ಕ್ವಾರಂಟೈನ್ ಪ್ರದೇಶಗಳಿಂದ ವರದಿ ಮಾಡುವಾಗ ಇದನ್ನು ಗಮನಿಸುವುದು ಅಗತ್ಯ. ಅಪಘಾತ ಸ್ಥಿತಿಯ ಬಗ್ಗೆ ವರದಿ ಮಾಡುವ ಮಾಧ್ಯಮ ಪ್ರತಿನಿಧಿಗಳಿಗೆ ಉಪಯುಕ್ತ ಮಾಹಿತಿಗಳು ಡಿಎಆರ್‍ಟಿ ಸೆಂಟರ್ ಫಾರ್ ಜರ್ನಲಿಸಂ ಅಂಡ್ ಟ್ರಾಮಾ ಮೂಲಕ ಲಭ್ಯ. ಹೆಚ್ಚಿನ ಸುರಕ್ಷತಾ ಸಂಪನ್ಮೂಲಗಳಿಗಾಗಿ ಸಿಪಿಜೆ ತುರ್ತು ಘಟನೆಗಳ ಬಗ್ಗೆ ಇರುವ ಮಾಹಿತಿಯನ್ನು ನೋಡಿ.
ನೀವು ಕರ್ತವ್ಯಕ್ಕೆ ನಿಯೋಜಿತರಾದ ಅವಧಿಯಲ್ಲಿ ಅಸ್ವಸ್ಥರಾದರೆ, ಯಾವ ಬಗೆಯ ನೆರವು ಹಾಗೂ ಬೆಂಬಲವನ್ನು ಆಡಳಿತ ಮಂಡಳಿ ಒದಗಿಸುತ್ತದೆ ಎಂಬ ಬಗ್ಗೆ ಚರ್ಚಿಸಿ. ಸ್ವಯಂ ಪ್ರತ್ಯೇಕತೆ ಅಥವಾ ಕ್ವಾರಂಟೈನ್/ಲಾಕ್‍ಡೌನ್ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಳ್ಳಬಹುದಾದ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಿ.
ಸೋಂಕಿನಿಂದ ತಪ್ಪಿಸಿಕೊಳ್ಳುವುದು ಹಾಗು ಇತರರಿಗೆ ಹರಡದಂತೆ ನೋಡಿಕೊಳ್ಳುವುದು
ಹಲವು ದೇಶಗಳು ಇಂದು ಸಾಮಾಜಿಕ/ ದೈಹಿಕ ಅಂತರವನ್ನು ಅನುಸರಿಸುತ್ತಿವೆ. ದೈಹಿಕ ಅಂತರವನ್ನು ಕಾಪಾಡಲು ನಿಗದಿ ಮಾಡಲಾಗಿರುವ ದೂರವು ನೀವು ಇರುವ ದೇಶದ ಮೇಲೆ ಅವಲಂಬಿಸುತ್ತದೆ. ಈ ಕೆಳಗೆ ನೀಡಲಾಗಿರುವ ಅತಿ ಹೆಚ್ಚಿನ ಅಪಾಯವಿರುವ ಪ್ರದೇಶಗಳಿಂದ ನೀವು ವರದಿ ಮಾಡುತ್ತಿದ್ದಲ್ಲಿ, ಅಲ್ಲಿ ಕೈಗೊಂಡಿರುವ ನೈರ್ಮಲ್ಯ ಕ್ರಮಗಳ ಬಗ್ಗೆ ಮೊದಲೇ ಮಾಹಿತಿ ಪಡೆದುಕೊಳ್ಳಿ. ನಿಮಗೆ ಸಂದೇಹವಿದ್ದಲ್ಲಿ ಅಲ್ಲಿಗೆ ಭೇಟಿ ನೀಡಬೇಡಿ. ಸೋಂಕು ತಗುಲದಂತೆ ಎಚ್ಚರಿಕೆ ವಹಿಸಿಕೊಳ್ಳಲು ಮಾಡುವ ನಿಗದಿತ ಶಿಫಾರಸ್ಸುಗಳು ಈ ಕೆಳಗಿನಂತಿವೆ:
- ಎಲ್ಲಾ ತರಹದ ಅರೋಗ್ಯ ಕೇಂದ್ರಗಳು
- ಹಿರಿಯರ ಆರೈಕೆ ಗೃಹಗಳು
- ಅನಾರೋಗ್ಯವಂತರು, ವಯಸ್ಸಾದವರು, ಗರ್ಭಿಣಿಯರು ಅಥವಾ ಆರೋಗ್ಯದ ಸಮಸ್ಯೆಯಿರುವವವರ ಮನೆಗಳು
- ರೋಗ ಹರಡುವ ಸಾಧ್ಯತೆಗಳು ಹೆಚ್ಚಿರುವ ಕೆಲಸದ ಸ್ಥಳಗಳು (ಉದಾ: ಮಾಂಸ ಸಂಸ್ಕರಣಾ ಘಟಕಗಳು
- ಸ್ಮಶಾನ, ಶವಗಾರ ಅಥವಾ ಅಂತ್ಯಕ್ರಿಯೆಗಳು
- ಪ್ರತ್ಯೇಕ ಸ್ಥಳ ಅಥವಾ ಕ್ವಾರೆಂಟಿನ್ ಸ್ಥಳಗಳು, ಲೊಕ್ಡೌನ್ ವಲಯಗಳು
- ಹೆಚ್ಚಿನ ಸಂಖ್ಯೆಯಲ್ಲಿ ಜನರು ಇರುವ ಸ್ಲಂ ಅಥವಾ ಕೊಳಗೇರಿಗಳು
ಸೋಂಕಿನಿಂದ ತಪ್ಪಿಸಿಕೊಳ್ಳಲು ಪ್ರಮಾಣಿತ ಶಿಫಾರಸುಗಳು:
- ಎಲ್ಲರಿಂದಲೂ ನಿಗದಿತ ದೈಹಿಕ ಅಂತರವನ್ನು ಕಾಪಾಡಿ. ಈ ಅಂತರವು ಸ್ಥಳೀಯ ಅಧಿಕಾರಿಗಳ ಸೂಚನೆಯ ಮೇಲೆ ಅವಲಂಬಿತವಾಗಿರುತ್ತದೆ. ಅದರಲ್ಲೂ ಮುಖ್ಯವಾಗಿ ಉಸಿರಾಟದ ಅಸ್ವಸ್ಥತೆಯ ಲಕ್ಷಣ ಅಂದರೆ ಕಫ, ಸೀನುವಿಕೆಯ ಲಕ್ಷಣ ಇರುವವರಿಂದ ದೂರ ಇರಿ. ಜೊತೆಗೆ ವೃದ್ಧರನ್ನು, ಅರೋಗ್ಯ ಸಮಸ್ಯೆಗಳು ಇರುವವರನ್ನು, ಸೋಂಕಿನ ಲಕ್ಷಣಗಳು ಇರುವವರ ಸಂಪರ್ಕದಲ್ಲಿ ಇರುವವರನ್ನು, ಕೋವಿಡ್19 ರೋಗಿಗಳಿಗೆ ಚಿಕಿತ್ಸೆ ನೀಡುವ ಸಿಬ್ಬಂದಿಗಳನ್ನು, ಹೆಚ್ಚು ಅಪಾಯವಿರುವ ಸ್ಥಳದಲ್ಲಿ ಕಾರ್ಯ ನಿರ್ವಹಿಸುವವರನ್ನು ಸಂದರ್ಶಿಸುವಾಗ ಎಚ್ಚರವಿರಲಿ.
- ಸಂದರ್ಶನವನ್ನು ಮುಕ್ತ ಅಥವಾ ಹೊರಾಂಗಣ ಪ್ರದೇಶದಲ್ಲಿ ನಡೆಸಲು ಪ್ರಯತ್ನಿಸಿ. ಸಂದರ್ಶನವನ್ನು ಮನೆಯೊಳಗೆ ಅಥವಾ ಒಳಾಂಗಣದಲ್ಲಿ ನಡೆಸಬೇಕಾದಲ್ಲಿ, ಗಾಳಿಯಾಡುವ ಜಾಗವನ್ನು ಆಯ್ಕೆ ಮಾಡಿ (ಉದಾ: ಕಿಟಕಿಗಳು ಇರುವ ಸ್ಥಳ). ಕಿರಿದಾದ ಜಾಗಗಳನ್ನು ಬಳಸಬೇಡಿ)
- ಕೈ ಕುಲುಕುವುದು, ಅಪ್ಪಿಕೊಳ್ಳುವುದು, ಮುತ್ತಿಡುವುದನ್ನು ಮಾಡಬೇಡಿ
- ಸಂದರ್ಶನ ಮಾಡುವಾಗ ಯಾವುದೇ ವ್ಯಕ್ತಿಯ ನೇರಕ್ಕೆ ನಿಲ್ಲಬೇಡಿ. ಬದಲಾಗಿ ಅವರಿಂದ ಸುರಕ್ಷಿತ ದೈಹಿಕ ಅಂತರದಲ್ಲಿ ನಿಂತು ಮಾತಾಡಿ.
- ನಿಯಮಿತವಾಗಿ, ಸೂಕ್ತವಾಗಿ ಹಾಗೂ ಸರಿಯಾಗಿ ನಿಮ್ಮ ಕೈಗಳನ್ನು ಕನಿಷ್ಠ 20 ಸೆಕೆಂಡ್ಗಳ ಕಾಲ ಬಿಸಿನೀರು ಮತ್ತು ಸೋಪು ಬಳಸಿ ತೊಳೆಯಿರಿ. ಸೂಕ್ತವಾಗಿ ಕೈಗಳು ಒಣಗುವಂತೆ ನೋಡಿಕೊಳ್ಳಿ. ಹೇಗೆ ಕೈ ತೊಳೆಯಬೇಕು ಹಾಗೂ ಒಣಗಿಸಿಕೊಳ್ಳಬೇಕು ಎಂಬ ಮಾಹಿತಿಯನ್ನು ಡಬ್ಲ್ಯುಎಚ್‍ಓ ವೆಬ್ಸೈಟ್ನಲ್ಲಿ ನೋಡಿಕೊಳ್ಳಬಹುದು.
- ಬಿಸಿನೀರು ಮತ್ತು ಸೋಪು ಲಭ್ಯವಿಲ್ಲದಿದ್ದಲ್ಲಿ ಬ್ಯಾಕ್ಟೀರಿಯಾ ನಿರೋಧಕ ಜೆಲ್ ಅಥವಾ ವೈಪ್‍ಗಳನ್ನು ಬಳಸಿ. ಆದರೆ ಆ ಬಳಿಕ ಸಾಧ್ಯವಾದಷ್ಟು ಶೀಘ್ರವಾಗಿ ಬಿಸಿ ನೀರು ಮತ್ತು ಸೋಪಿನಿಂದ ತೊಳೆದುಕೊಳ್ಳಿ. (ಸಿಡಿಸಿ ಶಿಫಾರಸ್ಸಿನಂತೆ, 60% ಎಥೆನಾಲ್ ಅಥವಾ 70% ಐಸೋಪೊರಪೊನಾಲ್ ಇರುವ ಆಲ್ಕೋಹಾಲ್ ಆಧರಿತ ಸ್ಯಾನಿಟೈಸರ್). ಹ್ಯಾಂಡ್ ಸ್ಯಾನಿಟೈಸರ್ ಬಳಸುತ್ತಿದ್ದೇವೆ ಎಂಬ ಕಾರಣಕ್ಕೆ ನಿಯತವಾಗಿ ಕೈ ತೊಳೆಯುವುದನ್ನು ನಿಲ್ಲಿಸಬೇಡಿ.
- ಕೆಮ್ಮುವಾಗ ಮತ್ತು ಸೀನುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಿ. ಕೆಮ್ಮು ಅಥವಾ ಸೀನುವಾಗ ಟಿಶ್ಶೂ ಪೇಪರ್ ಬಳಸಿದಲ್ಲಿ, ಅದನ್ನು ಸುರಕ್ಷಿತ ಹಾಗೂ ಸೂಕ್ತ ವಿಧಾನದಲ್ಲಿ ತಕ್ಷಣವೇ ವಿಲೇವಾರಿ ಮಾಡಿ. ಬಳಿಕ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ.
- ಬಿಬಿಸಿ ನೀಡಿದ ಸಲಹೆಯಂತೆ ನಿಮ್ಮ ಮುಖ, ಮೂಗು, ಬಾಯಿ, ಕಿವಿಗಳನ್ನು ಪದೇ ಪದೇ ಸ್ಪರ್ಶಿಸುತ್ತಿರಬೇಡಿ.
- ಸೋಂಕಿತ ವ್ಯಕ್ತಿ ಕುಡಿಯುವ ಕಪ್, ಪಾತ್ರೆ ಅಥವಾ ಇತರ ಸಲಕರಣೆಗಳಿಂದ ಆಹಾರ/ ಪಾನೀಯ ಹಂಚಿಕೊಳ್ಳಬೇಡಿ.
- ಕೂದಲಿಗೆ ಮುಸುಕನ್ನು ಹೊದಿಸಿ. ಉದ್ದನೆಯ ಕೂದಲನ್ನು ಕಟ್ಟಿಕೊಳ್ಳಿ
- ಯಾವುದೇ ಕಾರ್ಯಯೋಜನೆಯ ಮುನ್ನ ಎಲ್ಲ ಆಭರಣ ಅಥವಾ ವಾಚ್‍ಗಳನ್ನು ಕಳಚಿಡಿ. ಏಕೆಂದರೆ ಕೋವಿಡ್-19 ವೈರಸ್, ಹಲವು ಬಗೆಯ ಮೇಲ್ಮೈನಲ್ಲಿ ಧೀರ್ಘಕಾಲದ ವರೆಗೆ ಜೀವಿಸಬಲ್ಲದು.
- ನೀವು ಕನ್ನಡಕ ಬಳಸುವುದಾದಲ್ಲಿ, ನಿಯತವಾಗಿ ಬಿಸಿ ನೀರು ಮತ್ತು ಸೋಪಿನಿಂದ ಅದನ್ನು ತೊಳೆಯುತ್ತಿರಿ.
- ವರದಿ ಮಾಡಲು ತೆರಳುವಾಗ ಕಣ್ಣುಗಳ ಲೆನ್ಸ್ ನನ್ನು ಬಳಸಬೇಡಿ. ನೀವು ಕಣ್ಣುಗಳನ್ನು ಮುಟ್ಟುವಾಗ ಸೋಂಕಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.
- ನೀವು ಯಾವ ಬಗೆಯ ಬಟ್ಟೆ ಧರಿಸುತ್ತೀರಿ ಎನ್ನುವುದನ್ನು ಪರಿಗಣಿಸಿ; ಸುಲಭವಾಗಿ ತೊಳೆಯಲು ಸಾಧ್ಯವಾಗುವಂಥ ದಿರಿಸು ಉತ್ತಮ. ಕೆಲಸದ ಸ್ಥಳಕ್ಕೆ ಹೋಗಿ ಬಂದ ಬಳಿಕ ಬೆಚ್ಚಗಿನ ನೀರಿನಲ್ಲಿ ಬಟ್ಟೆಗಳನ್ನು ಡಿಟರ್ಜಂಟ್ ಬಳಸಿ ತೊಳೆಯಬೇಕು.
- ಸಾಧ್ಯವಾದಲ್ಲಿ ನೀವು ವರದಿ ಸಮಯದಲ್ಲಿ ಹಣವನ್ನು ಪಡೆಯುವುದಾಗಲಿ, ನೀಡುವುದಾಗಲಿ ಮಾಡಬೇಡಿ. ನಿಮ್ಮ ಕ್ರೆಡಿಟ್ ಹಾಗು ಡೆಬಿಟ್ ಕಾರ್ಡ್ ಗಳನ್ನು, ಪರ್ಸ್ ನನ್ನು ಸ್ವಚ್ಛವಾಗಿ ಇಡೀ. ನಿಮ್ಮ ಕೈಗಳನ್ನು ಯಾವಾಗಲೂ ಜೇಬಿಗೆ ಹಾಕಬೇಡಿ.
- ನೀವು ಕೆಲಸ ನಿರ್ವಹಿಸಬೇಕಾದ ಸ್ಥಳಕ್ಕೆ ಹೋಗ್ಯಾವ ಮತ್ತು ಹಿಂದಿರುಗುವ ಪ್ರಯಾಣದ ವ್ಯವಸ್ಥೆಯನ್ನು ಸರಿಯಾಗಿ ಅರಿತುಕೊಳ್ಳಿ. ಸಾರ್ವಜನಿಕ ಸಾರಿಗೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇದ್ದಲ್ಲಿ, ಪ್ರಯಾಣ ಮಾಡುವುದನ್ನು ತಪ್ಪಿಸಿ. ಇಳಿಯುವಾಗ ತಪ್ಪದೆ ಆಲ್ಕೋಹಾಲ್ ಜೆಲ್ ನನ್ನು ಕೈಗಳ ಮೇಲೆ ಬಳಸಿ.
- ಕಂಪನಿ ಅಥವಾ ಸ್ವಂತ ವಾಹನದಲ್ಲಿ ಪ್ರಯಾಣಿಸುತ್ತಿರುವಾಗ, ಒಬ್ಬ ಸೋಂಕಿಂತ ಪ್ರಯಾಣಿಕರಿಂದ ವಾಹನದ ಒಳಗೆ ವೈರಸ್ ಹರಡಬಹುದು ಎಂಬುದರ ಮೇಲೆ ಗಮನವಿರಲಿ. ಪ್ರಯಾಣಿಸುತ್ತಿರುವಾಗ ವಾಹನದ ಒಳಗೆ ಒಳ್ಳೆಯ ಗಾಳಿಯಾಡಲು ಕಿಟಕಿಗಳನ್ನು ತೆರೆದಿಡಿ ಹಾಗು ಮುಖದ ಮಾಸ್ಕ್ ಗಳನ್ನು ಧರಿಸಿ.
- ನಿಯತವಾಗಿ ವಿಶ್ರಾಂತಿ ಪಡೆಯುತ್ತಿರಿ ಹಾಗೂ ಆಯಾಸ/ ಶಕ್ತಿಯ ಮಟ್ಟದ ಬಗ್ಗೆ ಗಮನ ಇರಲಿ. ಬಳಲಿದ ವ್ಯಕ್ತಿ ತಮ್ಮ ನೈರ್ಮಲ್ಯ ವಿಚಾರದಲ್ಲಿ ಎಡವುವ ಸಾಧ್ಯತೆ ಅಧಿಕ ಎನ್ನುವುದು ನಿಮ್ಮ ಮನಸ್ಸಿನಲ್ಲಿರಲಿ. ಕೆಲಸದ ಮುನ್ನ ಮತ್ತು ಬಳಿಕ ಧೀರ್ಘ ಕಾಲದ ಪ್ರಯಾಣ ಇರುತ್ತದೆ ಎನ್ನುವುದು ನೆನಪಿರಲಿ.
ವೈಯಕ್ತಿಕ ಸುರಕ್ಷಾ ಸಾಧನಗಳು (ಪಿಪಿಇ)
ನಿಯೋಜನೆಯ ಸ್ವರೂಪದ ಆಧಾರದ ಮೇಲೆ, ಸುರಕ್ಷಿತವಾಗಿ ವರದಿ ಮಾಡಲು ಪತ್ರಕರ್ತರು ವೈದ್ಯಕೀಯ ಪಿಪಿಇಗಳನ್ನು ಧರಿಸಬೇಕಾಗಬಹುದು. ಇವುಗಳು ವಿಲೇವಾರಿ ಮಾಡಲಾಗುವ ಕೈಗವಸುಗಳು, ಮುಖವಾಡಗಳು, ಏಪ್ರನ್/ಮೇಲುಡುಪು/ಬಾಡಿ ಸೂಟ್ ಗಳು ಮತ್ತು ಪಾದರಕ್ಷೆಗಳನ್ನು ಮುಚ್ಚುವ ಕವರ್ ಹಾಗು ಇತರೆ ವಸ್ತುಗಳಾಗಿವೆ.
ಯಾವುದೇ ವೈದ್ಯಕೀಯ ಪಿಪಿಇ ಹಾಕಿಕೊಳ್ಳುವಾಗ ಮತ್ತು ಕಳಚುವಾಗ ಸಾಧ್ಯವಾದಷ್ಟೂ ಸುರಕ್ಷತಾ ಕ್ರಮಗಳಿಗೆ ಕಟ್ಟುನಿಟ್ಟಾಗಿ ಬದ್ಧರಾಗುವುದು ಅಗತ್ಯ. ಸಿಡಿಸಿಯಿಂದ ಸಾಮಾನ್ಯ ಮಾರ್ಗದರ್ಶನಕ್ಕಾಗಿ ಕ್ಲಿಕ್ ಮಾಡಿ.
(ಪಿಪಿಇಗಳನ್ನು ತೆಗೆಯುವ ಸಮಯದಲ್ಲಿ ವಿಶೇಷ ಕಾಳಜಿಯನ್ನು ವಹಿಸಬೇಕು. ಏಕೆಂದರೆ, ಈ ಸಮಯದಲ್ಲಿ ಸೋಂಕು ತಗುಲುವ ಸಾಧ್ಯತೆಗಳು ಅತಿ ಹೆಚ್ಚಾಗಿರುತ್ತದೆ. ಯಾವುದೇ ಸಂದೇಹವಿದ್ದಲ್ಲಿ, ನಿಯೋಜನೆಯ ಮೇಲೆ ತೆರಳುವ ಮೊದಲು ತಜ್ಞರ ಸಲಹೆಯನ್ನು ಮತ್ತು ತರಬೇತಿಯನ್ನು ಪಡೆಯಿರಿ.)
ದಯವಿಟ್ಟು ಗಮನಿಸಿ – ಕೆಲವು ದೇಶಗಳಲ್ಲಿ ಒಳ್ಳೆಯ ಗುಣಮಟ್ಟದ ವೈದ್ಯಕೀಯ ಪಿಪಿಇಗಳು ಕಡಿಮೆ ಪ್ರಮಾಣದಲ್ಲಿ ದೊರೆಯುತ್ತವೆ. ಅದರ ಬಳಕೆಯು ಕೊರತೆಯನ್ನು ಸೃಷ್ಟಿಸುವ ಸಾಧ್ಯತೆಗಳು ಇರುತ್ತವೆ.
- ನೀವು ಬಳಸುವ ಪಿಪಿಇ ಕಿಟ್ ನಿಮ್ಮ ಗಾತ್ರಕ್ಕೆ ಸರಿಯಾಗಿ ಹೊಂದಿಕೊಳ್ಳಬೇಕು. ಸರಿಯಾಗಿರದ ಪಿಪಿಇಗಳು ಹಾನಿಕಾರಕ. ಇವುಗಳು ಬಾಗಿಲಿಗೆ, ಸಂದಿಗಳಿಗೆ ತಗುಲಿ ಹರಿಯುವ ಸಾಧ್ಯತೆಗಳು ಹೆಚ್ಚಿರುತ್ತವೆ.
- ಯಾವಾಗಲೂ ಒಳ್ಳೆಯ ಬ್ರಾಂಡ್ ಗಳ ಪಿಪಿಇ ಗಳನ್ನು ತೊಟ್ಟುಕೊಳ್ಳಿ. ಕನಿಷ್ಠ ರೀತಿಯ ಸುರಕ್ಷತಾ ಕ್ರಮಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರಿ. ನಕಲಿ ಅಥವಾ ದೋಷಪೂರಿತ ವಸ್ತುಗಳ ಬಗ್ಗೆ ಎಚ್ಚರವಿರಲಿ. ಕೆಲವು ಒಳ್ಳೆಯ ಮತ್ತು ವಿಶ್ವಾಸಾರ್ಹ ಬ್ರಾಂಡ್ ಗಳ ಪಟ್ಟಿಯು ಇಲ್ಲಿ ಲಭ್ಯವಿದೆ.
- ಸೋಂಕಿತ ಪ್ರದೇಶಗಳಿಗೆ ಹೋಗುವಾಗ ಕೈಗವಸುಗಳನ್ನು ಧರಿಸಿ. ಗಮವಿಡಿ: ಲೇಟೆಕ್ಸ್ ಕೈಗವಸುಗಳಿಗಿಂತ ನೈಟ್ರ್ಯಲ್ ಗವಸುಗಳು ಹೆಚ್ಚು ಸುರಕ್ಷತೆಯನ್ನು ನೀಡುತ್ತವೆ. ಎರೆಡು ಕೈಗವಸುಗಳನ್ನು ಧರಿಸಿದರೆ, ಹೆಚ್ಚು ಸುರಕ್ಷತೆ ಇರುತ್ತದೆ.
- ಅರೋಗ್ಯ ಘಟಕದಂತಹ ಹೆಚ್ಚು ಅಪಾಯವಿರುವ ಸ್ಥಳದಿಂದ ವರದಿ ಮಾಡುತ್ತಿದ್ದಲ್ಲಿ, ಎರೆಡು ಜೋಡಿ ಪಿಪಿಎ ಕಿಟ್ ಗಳು ಹಾಗು ಮಾಸ್ಕ ಗಳು ಅತ್ಯಗತ್ಯ.
- ಇಡೀ ದೇಹವನ್ನು ರಕ್ಷಿಸುವ ಪಿಪಿಇ ಕಿಟ್ ನಂತಹ ಧರಿಸುಗಳನ್ನು ತೊಡುವ ಮುನ್ನ ಶೌಚಾಲಯವನ್ನು ಬಳಸಿ.
- ಕೆಲಸದ ಆಧಾರದ ಮೇಲೆ ನೀವು ಒಮ್ಮೆ ಮಾತ್ರ ಬಳಸಬಹುದಾದ ಪಾದರಕ್ಷೆಗಳನ್ನು ಅಥವಾ ಜಲನಿರೋಧಕ ಇಲ್ಲವೇ ಸ್ವಚ್ಛಗೊಳಿಸಬಹುದಾದ ಧರಿಸುಗಳನ್ನು ಉಪಯೋಗಿಸಬೇಕಾಗಬಹುದು. ಜಲನಿರೋಧಕ ಶೂಗಳನ್ನು ಸುರಕ್ಷಿತ ರೀತಿಯಲ್ಲಿ ವಿಲೇವಾರಿ ಮಾಡಿ.
- ಪಿಪಿಇ ಕಿಟ್ ಗಳನ್ನು ತರಬೇತಿ ಹೊಂದಿರುವವರ ಸಮ್ಮುಖದಲ್ಲಿ ಧರಿಸಿ ಹಾಗು ತೆಗೆಯಿರಿ. ಈ ಸಮಯದಲ್ಲಿ ಸೋಂಕು ತಗುಲುವ ಸಾಧ್ಯತೆಗಳು ಹೆಚ್ಚಿರುತ್ತವೆ. ಬೇಕಾದಲ್ಲಿ, ಸಿಡಿಸಿ ತಯಾರಿಸಿರುವ ಧರಿಸುವ ಮತ್ತು ತೆಗೆಯುವ ವಿಡಿಯೋವನ್ನು ನೋಡಿ. ಆದರೆ ತರಬೇತಿ ಹೊಂದಿರುವವರ ಸಹಾಯವನ್ನು ಕಡೆಗಾಣಿಸಬೇಡಿ.
- ಒಂದೇ ಬಾರಿ ಬಳಕೆ ಮಾಡುವಂತಹ ಪಿಪಿಇಗಳಾದ ಗ್ಲೋವ್ಸ್, ಬಾಡಿ ಸೂಟ್ಸ್, ಏಪ್ರಾನ್ ಅಥವಾ ಶೂ ಕವರ್ ಗಳನ್ನೂ ಮರುಬಳಕೆ ಮಾಡಬೇಡಿ. ಯಾವುದೇ ವಸ್ತುವನ್ನು ಮರುಬಳಕೆ ಮಾಡುವ ಮೊದಲು ಅದನ್ನು ಕಡ್ಡಾಯವಾಗಿ ಸ್ವಚ್ಛ ಮಾಡಬೇಕು. ಸೋಂಕಿಗೆ ತುತ್ತಾದ ಯಾವುದೇ ವಸ್ತುವನ್ನು ಸೋಂಕಿಂತ ಪ್ರದೇಶದಿಂದ ತೆರಳುವ ಮುನ್ನ ಸುರಕ್ಷಿತ ರೀತಿಯಲ್ಲಿ ವಿಲೇವಾರಿ ಮಾಡಿ.
ಮುಖದ ಮಾಸ್ಕ್
ಸಾರ್ವಜನಿಕ ಸ್ಥಳಗಳಲ್ಲಿ, ಇಕ್ಕಟ್ಟಾದ ಜಾಗಗಳಲ್ಲಿ ಅಥವಾ ಅತಿ ಹೆಚ್ಚು ಅಪಾಯವಿರುವ ಸ್ಥಳಗಳಲ್ಲಿ ವರದಿ ಮಾಡುವ ಪತ್ರಕರ್ತರು ಸರಿಯಾಗಿ ಮುಖವಾಡ ಅಥವಾ ಮಾಸ್ಕ್ ಗಳನ್ನು ಧರಿಸುವುದು ಅತಿ ಅವಶ್ಯಕ. ಇಂತಹ ಸ್ಥಳಗಳಲ್ಲಿ ಇರುವ ಗಾಳಿಯಲ್ಲಿ ವೈರಾಣುಯುಕ್ತ ಹನಿಗಳು ಬೇರೆಡೆಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿಇರುತ್ತವೆ. ಇದರಿಂದ ನೀವು ಸೋಂಕಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ.
ಗಮವಿಡಿ: ಮಾಸ್ಕ್ ಗಳನ್ನೂ ಸರಿಯಾದ ರೀತಿಯಲ್ಲಿ ಬಳಸಿದರೆ ಮಾತ್ರ ನಮಗೆ ರಕ್ಷಣೆ ಲಭ್ಯವಿರುತ್ತದೆ. ಲಾನ್ಸೆಟ್ ಇನ ಅಧ್ಯಯನದ ಪ್ರಕಾರ, ಸರ್ಜಿಕಲ್ ಮಾಸ್ಕ್ ಮೇಲೂ ವೈರಸ್ ಇರುವುದು ಕಂಡುಬಂದಿದೆ. ಈ ಅಧ್ಯಯನದ ಪ್ರಕಾರ, ಮಾಸ್ಕ್ ನನ್ನು ಪುನಃ ಪುನಃ ತೆಗೆದು ಹಾಕುವುದು, ಮಾಸ್ಕ್ ಮುಟ್ಟಿ ಮುಖವನ್ನು ಮುಟ್ಟುವುದು ಮಾಡಿದರೆ, ಸೋಂಕು ತಗುಲುತ್ತದೆ.
ನೀವು ಮುಖದ ಮಾಸ್ಕ್ ಬಳಸುವುದಾದಲ್ಲಿ ಈ ಕೆಳಗಿನ ಸಲಹೆಗಳನ್ನು ಅನುಸರಿಸಬೇಕು:
- ಇಕ್ಕಟ್ಟಾದ ಜಾಗಗಳಿಂದ, ಜನ ಸಂದಣಿ ಹೆಚ್ಚಿರುವ ಸ್ಥಳಗಳಿಂದ ಅಥವಾ ಅತಿ ಹೆಚ್ಚು ಅಪಾಯವಿರುವ ಸ್ಥಳಗಳಿಂದ ವರದಿ ಮಾಡುತ್ತಿದ್ದಲ್ಲಿ, ನಿಗದಿತ ಸರ್ಜಿಕಲ್ ಮಾಸ್ಕ್ ಬಳಸುವ ಬದಲು ಏನ್95 ಮಾಸ್ಕ್ ಅಥವಾ ಎಫ್ ಎಫ್ ಪಿ 2/ಎಫ್ ಎಫ್ ಪಿ 3 ಬಳಸುವುದು ಸೂಕ್ತ.
- ನೀವು ತೊಡುವ ಮಾಸ್ಕ ಗಳು ನಿಮ್ಮ ಮೂಗು ಹಾಗು ಗಲ್ಲವನ್ನು ಸರಿಯಾಗಿ ಮುಚ್ಚಬೇಕು. ಯಾವುದೇ ಕಾರಣಕ್ಕೂ ಸಂದಿ ಇರುವ ಅಥವಾ ಸಡಿಲವಾದ ಮಾಸ್ಕ್ ಗಳನ್ನು ಬಳಸಬೇಡಿ.
- ಮುಖವನ್ನು ಸರಿಯಾದ ರೀತಿಯಲ್ಲಿ ಮುಚ್ಚಲು, ಮುಖದ ಮೇಲಿನ ಗಡ್ಡ, ಮೀಸೆಯನ್ನು ತೆಗೆಯಿರಿ.
- ನಿಮ್ಮ ಮಾಸ್ಕ್ ನನ್ನು ಪದೇ ಪದೇ ಮುಟ್ಟಬೇಡಿ. ಮುಂಭಾಗವನ್ನು ಸಹ ಯಾವುದೇ ಕಾರಣಕ್ಕೂ ಮುಟ್ಟಬೇಡಿ. ಬದಲಾಗಿ, ಅದರ ಸ್ಟ್ರಾಪ್ ಅಥವಾ ದಾರವನ್ನು ಮಾತ್ರ ಹಿಡಿದು ಅದನ್ನು ಬದಲಾಯಿಸಿ. ಮಾಸ್ಕ ಮುಟ್ಟಿದ್ದಲ್ಲಿ, ಕೈಯನ್ನು ತೊಳೆಯಿರಿ.
- ಮಾಸ್ಕ್‍ಗಳ ಮರುಬಳಕೆ ಬೇಡ ಹಾಗೂ ಬಳಸಿದ ಮಾಸ್ಕ್‍ಗಳನ್ನು ಮುಚ್ಚಿದ ಲಕೋಟೆಗೆ ಹಾಕಿ ವಿಲೇವಾರಿ ಮಾಡಿ.
- ಮಾಸ್ಕ್ ತೆಗೆದ ಬಳಿಕ ಸದಾ ಕೈಗಳನ್ನು ಸೋಪು ಮತ್ತು ಬಿಸಿನೀರಿನಿಂದ ತೊಳೆಯಿರಿ ಅಥವಾ ಆಲ್ಕೋಹಾಲ್ ಆಧರಿತ ಹ್ಯಾಂಡ್ ಸ್ಯಾನಿಟೈಸರ್ (60% ಎಥೆನಾಲ್ ಅಥವಾ 70 % ಐಸೋಪ್ರೊಪನಾಲ್) ನಿಂದ ತೊಳೆಯಿರಿ.
- ಮಾಸ್ಕ್ ಒದ್ದೆಯಾದಲ್ಲಿ ಯಾವಾಗಲೂ ಹೊಸ ಅಥವಾ ಸ್ವಚ್ಛಗೊಳಿಸಿದ ಮಾಸ್ಕ್ ಬಳಸಿ.
- ಮಾಸ್ಕ್ ಬಳಕೆ ವೈಯಕ್ತಿಕ ಸುರಕ್ಷತೆಯ ಒಂದು ಭಾಗ ಮಾತ್ರ ಎನ್ನುವುದು ನೆನಪಿರಲಿ. ಇದರ ಜತೆಗೆ ನಿಯತವಾಗಿ ಕೈಗಳನ್ನು ಬಿಸಿನೀರು ಹಾಗೂ ಸೋಪಿನಿಂದ ತೊಳೆಯುವುದು, ನಿಮ್ಮ ಮುಖ, ಕಣ್ಣು, ಮೂಗು ಹಾಗೂ ಬಾಯಿಯನ್ನು ಪದೇ ಪದೇ ಸ್ಪರ್ಶಿಸದಿರುವುದು ಕೂಡಾ ಅಷ್ಠೇ ಮುಖ್ಯ.
- ಮುಖದ ಮಾಸ್ಕ್‍ಗಳ ಪೂರೈಕೆ ಕಡಿಮೆ ಇದೆ ಹಾಗೂ/ ಅಥವಾ ಆಯಾ ಸ್ಥಳಗಳಲ್ಲಿ ಬೆಲೆ ಏರಿಕೆಯಾಗಹುದು ಎನ್ನುವುದು ಗಮನದಲ್ಲಿರಲಿ.
ಸಲಕರಣೆಗಳ ಸುರಕ್ಷೆ
ಸೋಂಕಿನ ಸಂಪರ್ಕಕ್ಕೆ ಬಂದ ಉಪಕರಣಗಳ ಮೂಲಕ ಕೋವಿಡ್19 ಹರಡುವುದು ವಾಸ್ತವಿಕ ಸತ್ಯವಾಗಿದೆ. ಸುರಕ್ಷತಾ ಕ್ರಮಗಳನ್ನು ಎಲ್ಲಾ ಸಮಯದಲ್ಲೂ ಪಾಲಿಸಿ ಅನುಸರಿಸಬೇಕು:
- (ಸಾಧ್ಯವಿರುವ ಕಡೆಯಲ್ಲಿ ಸುರಕ್ಷಿತ ಅಂತರದಲ್ಲಿ ‘ಫಿಶ್ ಪೋಲ್’ ಮೈಕ್ ಗಳನ್ನು ಬಳಸಿ. ಕ್ಲಿಪ್ ಮೈಕ್ ಗಳನ್ನು ಕಟ್ಟುನಿಟ್ಟಾಗಿ ಸ್ವಚ್ಛತಾ ಕ್ರಮಗಳನ್ನು ಪಾಲಿಸಲಾಗುವ ನಿಯಂತ್ರಿತ ಸ್ಥಳಗಳಲ್ಲಿ ಮಾತ್ರ ಬಳಸಲು ಅವಕಾಶವಿದೆ.)
- ಪ್ರತಿ ಕಾರ್ಯದ ಬಳಿಕವೂ ಮೈಕ್ರೋಫೋನ್ ಕವರ್‍ಗಳನ್ನು ಚೆನ್ನಾಗಿ ತೊಳೆಯಿರಿ ಹಾಗೂ ಸೋಂಕು ನಿವಾಕರದಿಂದ ಸ್ವಚ್ಛಗೊಳಿಸಿ. ಯಾವುದೇ ಮಲಿನ ಅಥವಾ ಕಲಬೆರಕೆಗೆ ಅವಕಾಶವಾಗದಂತೆ ಮುಚ್ಚಳವನ್ನು ಹೇಗೆ ಸುರಕ್ಷಿತವಾಗಿ ತೆಗೆಯಬೇಕು ಎಂಬ ಬಗ್ಗೆ ಮಾರ್ಗದರ್ಶನ/ ತರಬೇತಿ ಪಡೆಯಿರಿ.
- ಕಡಿಮೆ ಬೆಲೆಯ ಕೇಳುವ ಸಾಧನಗಳನ್ನು ಬಳಸಿ. ಅವುಗಳನ್ನು ನಿಮ್ಮ ಅತಿಥಿಗಳಿಗೆ ನೀಡಿದ್ದಲ್ಲಿ, ಸಾಧ್ಯವಾದಲ್ಲಿ ಅವುಗಳನ್ನು ಒಮ್ಮೆ ಬಳಸಿ ವಿಲೇವಾರಿ ಮಾಡಿ. ಬಳಸಿದ ನಂತರ ಅವುಗಳನ್ನು ಸ್ವಚ್ಛಗೊಳಿಸಿ.
- ವರದಿ ಮಾಡಬೇಕಾದ ಸ್ಥಳದಿಂದ ಅಂತರವನ್ನು ಕಾಪಾಡಲು ಲಾಂಗ್ ಸೈಟ್ ಲೆನ್ಸ್ ನನ್ನು ಬಳಸಿ.
- ಯಾವಾಗ ಸಾಧ್ಯವೋ ಅವಾಗ, ಕೇಬಲ್ ಇರುವ ಸಾಧನಗಳನ್ನು ಬಳಸುವುದಕ್ಕಿಂತ ಮೊಬೈಲ್ ಉಪಕರಣಗಳನ್ನು ಬಳಸಿ.
- ನೀವು ಕೆಲಸಕ್ಕೆ ತೆರಳುವಾಗ ನಿಮ್ಮ ಉಪಕರಣಗಳನ್ನು ಯಾವ ರೀತಿಯಲ್ಲಿ ಸ್ಟೋರ್ ಮಾಡುತ್ತೀರಿ ಎಂಬ ಬಗ್ಗೆ ಮೊದಲೇ ನಿಯೋಜನೆ ಹಾಕಿಕೊಳ್ಳಿ. ಯಾವುದೇ ವಸ್ತುವನ್ನು ಅಲ್ಲಲ್ಲಿ ಇಡಬೇಡಿ. ಎಲ್ಲವನ್ನು ಅವುಗಳ ಕೇಸ್ ಒಳಗೆ ಇರಿಸಿ. (ಇವುಗಳು ಸ್ವಚ್ಛ ಮಾಡಲು ಸುಲಭವಾಗಿರಬೇಕು)
- ಸಾಧ್ಯವಾದಲ್ಲಿ, ನೀವು ಬಳಸುವ ಪ್ಲಾಸ್ಟಿಕ್ ಉಪಕರಣಗಳ ಮೇಲೆ ಪ್ಲಾಸ್ಟಿಕ್ ಕವರ್ ಗಳನ್ನು ಹೊದಿಸಿ. ಇದು ಅವುಗಳು ಮಲಿನಗೊಳ್ಳುವ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ. ಇದು ಸ್ವಚ್ಛ ಮಾಡುವ ಪ್ರಕ್ರಿಯೆಯನ್ನು ಸಹ ಸುಲಭವಾಗಿಸಲಿದೆ.
- ಯಾವಾಗಲೂ ಸಂಪೂರ್ಣವಾಗಿ ಚಾರ್ಜ್ ಆಗಿರುವ ಹೆಚ್ಚುವರಿ ಬ್ಯಾಟರಿಗಳನ್ನು ಇಟ್ಟುಕೊಳ್ಳಿ. ಹೊರಗಡೆ ಎಂದು ನಿಮ್ಮ ಉಪಕರಣಗಳನ್ನು ಬದಲಾಯಿಸಬೇಡಿ.
- ಮೆಮಿಸೆಪ್ಟೋಲ್‍ನಂಥ ಕ್ಷಿಪ್ರವಾಗಿ ಕಾರ್ಯ ನಿರ್ವಹಿಸುವ ಮೈಕ್ರೋಬಿಯಾಲ್ ನಿರೋಧಕಗಳಿಂದ ಮಾಲಿನ್ಯವನ್ನು ಸ್ವಚ್ಛಗೊಳಿಸಿ. ಬಳಿಕ ಸೋಂಕು ನಿವಾರಕದಿಂದ ಸ್ವಚ್ಛಗೊಳಿಸಿ. ಇದರಲ್ಲಿ ಸೆಲ್ ಫೋನ್, ಟೇಬಲ್, ಲೀಡ್ಸ್, ಪ್ಲಗ್, ಇಯರ್‍ಫೋನ್, ಲ್ಯಾಪ್‍ಟಾಪ್, ಹಾರ್ಡ್ ಡಿವೈಸ್, ಕ್ಯಾಮೆರಾ, ಪ್ರೆಸ್ ಪಾಸ್ ಮತ್ತು ಲ್ಯಾನ್‍ಯಾರ್ಡ್‍ಗಳು ಸೇರುತ್ತವೆ ಹಾಗೂ ಇವಷ್ಟಕ್ಕೇ ಸೀಮಿತವಲ್ಲ.
- ನಿಮ್ಮ ಮೂಲಸ್ಥಾನಕ್ಕೆ ಬಂದ ಬಳಿಕ ಎಲ್ಲ ಸಾಧನಗಳನ್ನು ಮತ್ತೆ ಸ್ವಚ್ಛಗೊಳಿಸಿ. ಈ ಸಾಧನಗಳ ಜವಾಬ್ದಾರಿ ಇರುವವರು ಈ ಸಲಹೆ ಬಗ್ಗೆ ಅರಿತುಕೊಳ್ಳುವಂತೆ ಮಾಡಿ ಹಾಗೂ ಸುರಕ್ಷಿತವಾಗಿ ಸಾಧನಗಳನ್ನು ಹೇಗೆ ಸ್ವಚ್ಛಗೊಳಿಸಬೇಕು ಎಂಬ ಬಗ್ಗೆ ತರಬೇತಿ ನೀಡಿ. ಯಾವುದೇ ಸಾಧನಗಳನ್ನು ಹಾಗೆಯೇ ತಂದು ರಾಶಿ ಹಾಕುವುದು ಅಥವಾ ಸ್ವಚ್ಛಗೊಳಿಸುವ ಜವಾಬ್ದಾರಿ ಇರುವ ವ್ಯಕ್ತಿಗೆ ವಾಪಾಸು ನೀಡದಿರುವುದು ಸರಿಯಲ್ಲ.
- ನೀವು ವಾಹನಗಳನ್ನು ಬಳಸುವುದಾದಲ್ಲಿ, ಯಾವುದೇ ಕಾರ್ಯ ನಿಯೋಜನೆ ಪೂರ್ಣಗೊಳಿಸಿದ ಬಳಿಕ ಒಳಾಂಗಣವನ್ನು ಸೂಕ್ತ ತರಬೇತಿ ಪಡೆದ ತಂಡದಿಂದ ಸಂಪೂರ್ಣ ಸ್ವಚ್ಛಗೊಳಿಸುವುದನ್ನು ಖಾತರಿಪಡಿಸಿಕೊಳ್ಳಿ. ಬಾಗಿಲಿನ ಹ್ಯಾಂಡಲ್, ಸ್ಟೀರಿಂಗ್ ವ್ಹೀಲ್, ಹೆಡ್ ರೆಸ್ಟ್, ಸೀಟ್ ಬೆಲ್ಟ್, ಡ್ಯಾಷ್‍ಬೋರ್ಡ್, ಕಿಟಕಿಯ ವಿಂಡರ್/ಹಿಡಿಕೆ/ಬಟನ್‍ಗಳ ಸ್ವಚ್ಛತೆ ಮೇಲೆ ಹೆಚ್ಚಿನ ಗಮನ ಇರಲಿ.
ವಿದ್ಯುತ್ ಉಪಕರಣಗಳನ್ನು ಸ್ವಚ್ಛಗೊಳಿಸುವ ವಿಧಾನ
ಕೆಳಗೆ ನೀಡಿರುವ ಸಲಹೆಗಳು ವಿದ್ಯುತ್ ಉಪಕರಣಗಳನ್ನು ಬಳಸುವಾಗ ಸಹಾಯವಾಗಲಿವೆ. ಸ್ವಚ್ಛ ಮಾಡುವ ಮೊದಲು ಯಾವಾಗಲೂ ಅದರ ತಯಾರಕರು ನೀಡಿರುವ ಸಲಹೆಗಳನ್ನು ಓದಿ.
- ಎಲ್ಲಾ ವಿದ್ಯುತ್ ಮೂಲಗಳು, ಸಾಧನಗಳು ಮತ್ತು ಕೇಬಲ್‌ಗಳನ್ನು ಯಾವಾಗಲೂ ಅನ್ಪ್ಲಗ್ ಮಾಡಿ / ತೆಗೆದುಹಾಕಿ
- ಯಾವುದೇ ದ್ರವಗಳನ್ನು ನಿಮ್ಮ ಸಾಧನದಿಂದ ದೂರವಿಡಿ, ಮತ್ತು ಏರೋಸಾಲ್ ದ್ರವೌಷಧಗಳು, ಬ್ಲೀಚ್‌ಗಳು ಮತ್ತು ಅಪಘರ್ಷಕ ವಸ್ತುಗಳನ್ನು ಬಳಸಬೇಡಿ – ಇವು ಖಂಡಿತವಾಗಿಯೂ ನಿಮ್ಮ ಸಾಧನಗಳನ್ನು ಹಾನಿಗೊಳಿಸುತ್ತವೆ
- ಯಾವುದೇ ವಸ್ತುವನ್ನು ನೇರವಾಗಿ ನಿಮ್ಮ ಸಾಧನಕ್ಕೆ ಸಿಂಪಡಿಸಬೇಡಿ
- ಮೃದುವಾದ, ಲಿಂಟ್-ಮುಕ್ತ ಬಟ್ಟೆಯನ್ನು ಮಾತ್ರ ಬಳಸಿ
- ಬಟ್ಟೆಯನ್ನು ತೇವಗೊಳಿಸಿ, ಆದರೆ ಒದ್ದೆ ಮಾಡಬೇಡಿ. ಬಟ್ಟೆಗೆ ಸ್ವಲ್ಪ ಸಾಬೂನು ಸೇರಿಸಿ ಮತ್ತು ಅದನ್ನು ನಿಮ್ಮ ಕೈಯಿಂದ ಬಟ್ಟೆಗೆ ಉಜ್ಜಿಕೊಳ್ಳಿ
- ನಿಮ್ಮ ಉಪಕರಣವನ್ನು ಸರಿಯಾಗಿ ಉಜ್ಜಿ ಸ್ವಚ್ಛ ಮಾಡಿ
- ತೇವಾಂಶವು ಯಾವುದೇ ತೆರೆಯುವಿಕೆಗೆ ಪ್ರವೇಶಿಸಲು ಅನುವು ಕೊಡಬೇಡಿ (ಉದಾಹರಣೆಗೆ ಚಾರ್ಜಿಂಗ್ ಸಾಕೆಟ್‌ಗಳು, ಇಯರ್‌ಫೋನ್ ಸಾಕೆಟ್‌ಗಳು, ಕೀಬೋರ್ಡ್‌ಗಳು)
- ನಿಮ್ಮ ಸಾಧನವನ್ನು ಸ್ವಚ್ಛ ಮತ್ತು ಮೃದುವಾದ ಬಟ್ಟೆಯಿಂದ ಒಣಗಿಸಿ
- ಕೆಲವು ತಯಾರಕರು ಯಾವುದೇ ಕಠಿಣ ಮೇಲ್ಮೈಗಳಿಗೆ 70% ಐಸೊಪ್ರೊಪೈಲ್ ಆಲ್ಕೋಹಾಲ್ ಬಳಸುವುದನ್ನು ಶಿಫಾರಸು ಮಾಡುತ್ತಾರೆ
- ನಿಮ್ಮ ಸಾಧನಗಳನ್ನು ಸ್ವಚ್ಛ ಮಾಡುವ ಮೊದಲು ಯಾವಾಗಲೂ ತಯಾರಕರ ಸಲಹೆಯನ್ನು ಪಡೆಯಿರಿ, ಏಕೆಂದರೆ ನೀವು ಬಳಸುವ ದ್ರುವಗಳು ನಿಮ್ಮ ಸಾಧನವನ್ನು ಹಾನಿಗೊಳಿಸುತ್ತವೆ
ಈ ಲಿಂಕ್ ಬಳಸಿ ಇದರ ಬಗ್ಗೆ ಹೆಚ್ಚು ಮಾಹಿತಿಯನ್ನು ಪಡೆಯಬಹುದು.
ಡಿಜಿಟಲ್ ಭದ್ರತೆ
- ಕೋವಿಡ್-19 ಸಾಂಕ್ರಾಮಿಕವನ್ನು ವರದಿ ಮಾಡುವ ಪತ್ರಕರ್ತರು ಸದಾ ಆನ್ಲೈನ್ ದ್ವೇಷವನ್ನು ಎದುರಿಸಬೇಕಾಗುವ ಸಾಧ್ಯತೆ ಇರುತ್ತದೆ ಎನ್ನುವ ಬಗ್ಗೆ ಎಚ್ಚರಿಕೆ ಇರಬೇಕು. ನಿಮ್ಮನ್ನು ಇಂಥ ಯಾವುದೇ ರೀತಿಯ ಹಲ್ಲೆಗಳಿಂದ ಸುರಕ್ಷಿತವಾಗಿರಲು ಸಿಪಿಜೆಯ ಬೆಸ್ಟ್ ಪ್ರಾಕ್ಟೀಸ್ಗಳನ್ನು ಪರಾಮರ್ಶಿಸಿ
- ಕೋವಿಡ್-19 ಸಾಂಕ್ರಾಮಿಕ ಹರಡುವುದನ್ನು ಟರ್ಯಾಕ್ ಮಾಡಲು ಸರ್ಕಾರಗಳು ಹಾಗೂ ತಂತ್ರಜ್ಞಾನ ಕಂಪನಿಗಳು ಹೆಚ್ಚು ಹೆಚ್ಚು ಕಣ್ಗಾವಲು ವಯವಸ್ಥೆಯನ್ನು ಜಾರಿಗೊಳಿಸುತ್ತಿವೆ. ಇದರಲ್ಲಿ ಪೆಗಾಸಸ್ ಸೃಷ್ಟಿಸಿರುವ ಎನ್‍ಎಸ್‍ಓ ಗುಂಪು ಸೇರುತ್ತದೆ. ಇದು ಪತ್ರಕರ್ತರನ್ನು ಗುರಿ ಮಾಡಿದ ಸ್ಪೈವೇರ್ ಆಗಿದೆ ಎಂದು ಸಿಟಿಜನ್ ಲ್ಯಾಬ್ ಹೇಳುತ್ತದೆ. ಈ ಕಣ್ಗಾವಲು ತಂತ್ರಗಳನ್ನು ಈ ಆರೋಗ್ಯ ಸಂದಿಗ್ಧ ಸ್ಥಿತಿ ಮುಗಿದ ಬಳಿಕ ಹೇಗೆ ಜನರನ್ನು ಗುರಿ ಮಾಡಲು ಬಳಸಬಹುದು ಎಂಬ ಬಗ್ಗೆ ನಾಗರಿಕ ಸ್ವಾತಂತ್ರ್ಯ ಗುಂಪುಗಳು ಆತಂಕ ವ್ಯಕ್ತಪಡಿಸಿವೆ. ಟ್ರಾನ್ಸ್‍ಫರೆನ್ಸಿ ಇಂಟರ್‍ನ್ಯಾಷನಲ್ ಈ ಜಾಗತಿಕ ಬೆಳವಣಿಗೆಗಳನ್ನು ತಮ್ಮ ವೆಬ್‍ಸೈಟ್ ಮೂಲಕ ಟ್ರ್ಯಾಕ್ ಮಾಡುತ್ತಿದೆ.
- ವರದಿಗಳ ಪ್ರಕಾರ, ದುಷ್ಕರ್ಮಿಗಳು ಮುಂದುವರೆಯುತ್ತಿರುವ ಅರೋಗ್ಯ ಪಿಡುಗನ್ನು ನೆಪವಾಗಿಟ್ಟುಕೊಂಡು ಜನರಿಗೆ ಮತ್ತು ಸಂಘಟನೆಗಳಿಗೆ ಮೋಸವೆಸಗುತ್ತಿದ್ದರೆ. ಇದರಲ್ಲಿ ಲಸಿಕೆಗೆ ಸಂಬಂಧಿತ ಹಗರಣಗಳು ಹೆಚ್ಚಾಗಿವೆ.)ಕೋವಿಡ್-19 ಮಾಹಿತಿಗಳನ್ನು ಒಳಗೊಂಡ ಅಥವಾ ಲಸಿಕೆ ದಾಖಲೆಗಳನ್ನು ಡೌನ್‍ಲೋಡ್ ಮಾಡಲು ಕ್ಲಿಕ್ಕಿಸುವ ಮುನ್ನ ಕ್ಷಣಕಾಲ ನಿಲ್ಲಿ ಹಾಗೂ ಯೋಚಿಸಿ. ಅತ್ಯಾಧುನಿಕ ಫಿಶಿಂಗ್ ವಿಧಾನದ ಮೂಲಕ ದಾಳಿ ನಡೆಸಿ ನಿಮ್ಮ ಸಾಧನಗಳಿಗೆ ಮಾಲ್‍ವೇರ್‍ಗಳನ್ನು ಅಳವಡಿಸಲು ಹೊಂಚು ಹಾಕುತ್ತಿರುತ್ತಾರೆ ಎಂದು ಎಲೆಕ್ಟ್ರಾನಿಕ್ ಫ್ರಾಂಟಿಯರ್ ಫೌಂಡೇಷನ್ ಎಚ್ಚರಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಮೆಸ್ಸೇಜಿಂಗ್ ಆ್ಯಪ್‍ಗಳಲ್ಲಿ ಕೋವಿಡ್-19 ಮಾಹಿತಿಯನ್ನು ಕ್ಲಿಕ್ ಮಾಡುವ ಮುನ್ನ ಹೆಚ್ಚು ಜಾಗೃತೆ ವಹಿಸಿ. ಈ ಪೈಕಿ ಹಲವು ಸೈಟ್‍ಗಳು ನಿಮ್ಮ ಸಾಧನಗಳಿಗೆ ಮಾಲ್‍ವೇರ್ ಸೋಂಕು ಹರಡುವ ಸೈಟ್‍ಗಳ ಜತೆ ಸಂಪರ್ಕ ಹೊಂದಿರಬಹುದು.
- ದ ಗಾರ್ಡಿಯನ್ ಹೇಳುವಂತೆ ಸರ್ಕಾರಿ ಪ್ರಾಯೋಜಿತ ತಪ್ಪು ಮಾಹಿತಿಗಳ ಬಗ್ಗೆ ಎಚ್ಚರದಿಂದ ಇರಬೇಕು. ಜತೆಗೆ ಸಾಮಾನ್ಯ ತಪ್ಪು ಮಾಹಿತಿಗಳ ಬಗ್ಗೆಯೂ ಎಚ್ಚರ ಇರಲಿ ಎಂದು ನಿರ್ದಿಷ್ಟವಾಗಿ ವಿಶ್ವ ಆರೋಗ್ಯ ಸಂಸ್ಥೆಯ ವೆಬ್‍ಸೈಟ್ ಹೇಳಿದೆ ಎಂದು ಬಿಬಿಸಿ ಒತ್ತಿ ಹೇಳಿದೆ. ಡಬ್ಲ್ಯುಎಚ್‍ಓ ವೆಬ್ಸೈಟ್ನಲ್ಲಿ ಸುಳ್ಳು ಮಾಹಿತಿಯನ್ನು ಬೇಧಿಸುವ ಮಾರ್ಗಸೂಚಿ ಲಭ್ಯವಿದೆ.
- ಆನ್ಲೈನ್ ಕಾನ್ ಫಾರೆನ್ಸಿಂಗ್ ಮತ್ತು ವಯುಕ್ತಿಕ ಮಾಹಿತಿಯ ಗೌಪ್ಯತೆಯ ಬಗ್ಗೆ ಓದಿ ತಿಳಿದುಕೊಳ್ಳಿ. ಇದು ನಿಮಗೆ ನಿಮ್ಮ ಮಾಹಿತಿಯನ್ನು ಹೇಗೆ ಬಳಸಿಕೊಳ್ಳಲಾಗುತ್ತಿದೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಿದೆ. ಹೆಚ್ಚು ಹೆಚ್ಚು ಜನರು ಮನೆಯಿಂದ ಕೆಲಸವನ್ನು ಪ್ರಾರಂಭಿಸಿರುವುದರಿಂದ, ಹ್ಯಾಕರ್ ಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸಕ್ರೀಯಗೊಂಡಿದ್ದಾರೆ.
- ನಿರಂಕುಶ ಪ್ರಭುತ್ವ ಇರುವ ದೇಶಗಳಿಂದ ವರದಿ ಮಾಡುವಾಗ ಎದುರಾಗಬಹುದಾದ ಅಪಾಯ ಸಾಧ್ಯತೆಗಳ ಬಗ್ಗೆ ಎಚ್ಚರ ಇರಲಿ. ಇಂಥ ದೇಶಗಳಲ್ಲಿ ಕೋವಿಡ್-19 ಸಾಂಕ್ರಾಮಿಕದ ವರದಿಗಳ ಬಗ್ಗೆ ಹೆಚ್ಚು ನಿಕಟವಾಗಿ ನಿಗಾ ವಹಿಸುವ ಸಾಧ್ಯತೆ ಇದೆ. ಕೆಲ ಸರ್ಕಾರಗಳು ಈ ಸಾಂಕ್ರಾಮಿಕದ ಪ್ರಮಾಣವನ್ನು ಮರೆಮಾಚಲು ಅಥವಾ/ ಮತ್ತು ಅದಕ್ಕೆ ತಕ್ಕಂತೆ ಸೆನ್ಸಾರ್ ಮಾಡುವ ಸಾಧ್ಯತೆ ಇದೆ ಎಂಧು ಸಿಪಿಜೆ ಎಚ್ಚರಿಸಿದೆ.
ಕೆಲಸದ ವೇಳೆ ದೈಹಿಕ ಭದ್ರತೆ
- ನೀವು ಅಂತಾರಾಷ್ಟ್ರೀಯ ಕೆಲಸದ ಮೇಲೆ ತೆರಳುತ್ತಿರಾದಲ್ಲಿ, ಅಲ್ಲಿನ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಿ. (ಇಲ್ಲಿ ನೋಡಿ) ಕೋವಿಡ್-19 ಪಿಡುಗು ಆರಂಭಗೊಂಡ ಸಮಯದಿಂದಲೂ, ವಿಶ್ವದೆಲ್ಲೆಡೆ ಅನೇಕ ರೀತಿಯ ಹಿಂಸಾಚಾರ ಮತ್ತು ಪ್ರತಿಭಟನೆಗಳು ನಡೆಯುತ್ತಿವೆ. ಕೆಲವು ಪತ್ರಕರ್ತರು ತಿಳಿಸಿರುವಂತೆ, ಅವರು ಮೌಖಿಕ ಕಿರುಕುಳಕ್ಕೆ ಹಾಗು ಕ್ರಿಮಿನಲ್ ಮೊಕದ್ದಮೆಗಳಿಗೆ ಗುರಿಯಾಗಿದ್ದಾರೆ. ಅದಕ್ಕಾಗಿ, ಸುರಕ್ಷತೆಯನ್ನು ಯಾವುದೇ ಕಾರಣಕ್ಕೂ ಕಡೆಗಾಣಿಸಬೇಡಿ.)
- ಗ್ರಾಮಾಂತರ ಪ್ರದೇಶಗಳಿಂದ ವರದಿ ಮಾಡುವಾಗ ಹೆಚ್ಚು ನಿಗಾ ವಹಿಸಿ. ಜನರು ನೀವು ಸಾಂಕ್ರಾಮಿಕ ರೋಗವನ್ನು ಹೊತ್ತು ತರುತ್ತೀರಾ ಎಂದು ನಿಮ್ಮ ಮೇಲೆ ಸಿಟ್ಟಾಗಬಹುದು.
- ಕೋವಿಡ್ 19 ಲೊಕ್ಡೌನ್ ಕ್ರಮಗಳಿಗೆ ಸಂಬಂಧಿಸಿದಂತೆ, ಪೋಲಿಸಲು ಬಲಪ್ರಯೋಗ ಮಾಡುವ ಸಂಭಾವ್ಯತೆ ಹೆಚ್ಚಿರುತ್ತದೆ. ಇದು ದೈಹಿಕ ಆಕ್ರಮಣ ಮತ್ತು ಆಶ್ರುವಾಯುವಿನ ಬಳಕೆಯನ್ನು ಒಳಗೊಂಡಿರಬಹುದು.
- ನಿರಂಕುಶ ಪ್ರಜಾರಭುತ್ವ ಅಸ್ತಿತ್ವದಲ್ಲಿ ಇರುವ ರಾಷ್ಟ್ರಗಳಿಂದ ವರದಿ ಮಾಡುವ ಪತ್ರಕರ್ತರು, ಕೋವಿಡ್ 19 ರ ಬಗ್ಗೆ ವರದಿ ಮಾಡುತ್ತಿರುವ ಸಮಯದಲ್ಲಿ ಬಂಧನಕ್ಕೆ ಅಥವಾ ಗಡಿಪಾರಿಗೆ ಒಳಗಾಗುವ ಅಪಾಯವಿರುತ್ತದೆ ಎಂಬ ಅರಿವನ್ನು ಹೊಂದಿರಬೇಕೆಂದು ಸಿಪಿಜೆ ತಿಳಿಸಿದೆ.
ಅಂತರರಾಷ್ಟ್ರೀಯ ಪ್ರಯಾಣ ನಿಯೋಜನೆಗಳು
ಜಾಗತಿಕವಾಗಿ ಪ್ರಯಾಣ ನಿರ್ಬಂಧಗಳು ಜಾರಿಯಲ್ಲಿರುವುದರಿಂದ ಅಂತರರಾಷ್ಟ್ರೀಯ ಪ್ರವಾಸ ನಿಜಕ್ಕೂ (ಕಷ್ಟಕರವಾಗಿ ಉಳಿದಿದೆ). ನಿಮ್ಮ ಸಾಗರೋತ್ತರ ಕಾರ್ಯಗಳು ಸಾಧ್ಯ ಎಂದಾದಲ್ಲಿ ಈ ಕೆಳಗಿನ ಅಂಶಗಳ ಬಗ್ಗೆ ಗಮನ ಹರಿಸಿ:
- ನೀವು ತೆರಳಬೇಕಾದ ಸ್ಥಳದಲ್ಲಿ ಯಾವಾಗ ಪ್ರಯಾಣ ನಿಷೇಧ ವಿಧಿಸಲಾಗುತ್ತದೆ ಎಂಬ ಬಗ್ಗೆ ಮೊದಲೇ ತಿಳಿದುಕೊಳ್ಳಿ. ಈ ಸಂದರ್ಭದಲ್ಲಿ ಅವುಗಳು ಯಾವುದೇ ಸುಳಿವಿಲ್ಲದೆ ಬದಲಾಗಬಹುದು.
- ದೇಶದ ವಿವಿಧ ಭಾಗಗಳಲ್ಲಿ ಬೇರೆ ಬೇರೆ ರೀತಿಯ ಕರ್ಫ್ಯೂ ಗಳು ಅಥವಾ ನಿರ್ಬಂಧನೆಗಳು ಜಾರಿಯಲ್ಲಿರಲಿವೆ ಎಂಬುದನ್ನು ತಿಳಿದುಕೊಂಡಿರಿ. ಗಮದಲ್ಲಿಡಬೇಕಾದ ವಿಷಯವೆಂದರೆ, ಸ್ಥಳೀಯ ಲಾಕ್ ಡೌನ್ ಕ್ರಮಗಳನ್ನು ಯಾವುದೇ ಮುನ್ಸೂಚನೆಗಳು ಇಲ್ಲದೆಯೇ ವಿಧಿಸುವ ಸಾಧ್ಯತೆಗಳು ಇರುತ್ತವೆ. ಅದಕ್ಕಾಗಿ, ದೇಶದೊಳಗೆ ಯಾವ ಯಾವ ನಿರ್ಬಂಧನೆಗಳು ಹೇರಲಾಗುತ್ತಿವೆ ಎಂಬ ಮಾಹಿತಿಯನ್ನು ಪಡೆಯಲು ಯಾವಾಗಲೂ ಸ್ಥಳೀಯ ಮೂಲಗಳನ್ನು ಅನುಸರಿಸಿ.
- ಹಿಂದಿರುಗಿದ ನಂತರದ ಕ್ವಾರೆಂಟಿನ್ ಕ್ರಮಗಳನ್ನು ಯಾವುದೇ ಮುನ್ಸೂಚನೆಗಳು ಇಲ್ಲದೆಯೇ ನವೀಕರಿಸಲಾಗುತ್ತದೆ. ಇದು ನೀವು ಹಿಂದಿರುಗುತ್ತಿರುವ ಸ್ಥಳದ ಮೇಲೆ ಅವಲಂಬಿತವಾಗಿರುತ್ತದೆ. ಇತ್ತೀಚಿಗೆ ಯುನೈಟೆಡ್ ಕಿಂಗ್ಡಮ್ ಗೆ ಸ್ಪೇನ್ ನಿಂದ ಹಿಂದಿರುಗಿದವರ ಮೇಲೆ ಇಂತಹ ಕ್ರಮಗಳನ್ನು ಹೇರಲಾಯಿತು.
- ನೀವು ಕೆಲಸ ಮಾಡಲಿರುವ ಸ್ಥಳದಲ್ಲಿ ಇರುವ ಎಲ್ಲಾ ಅರೋಗ್ಯ ಇಂದ್ರಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿಕೊಂಡಿರಿ. ಇಲ್ಲಿರುವ ವೈದ್ಯಕೀಯ ಸಿಬ್ಬಂದಿಗಳು ಯಾವುದೇ ಸೂಚನೆಗಳನ್ನು ನೀಡದೆಯೇ ಮುಷ್ಕರ ಅಥವಾ ಪ್ರತಿಭಟನೆಗೆ ಇಳಿಯಬಹುದು.
- ಮೆಡಿಕಲ್ ಪಿಪಿಇಗಳ ಲಭ್ಯತೆಯಲ್ಲಿ ಕೊರತೆ ಕಂಡುಬರಬಹುದು ಅಥವಾ ದೋಷವಿರುವ ಕಿಟ್ ಗಳು ಕಂಡುಬರಬಹುದು. ಇವುಗಳ ಲಭ್ಯತೆಯನ್ನು ನಿಯೋಜನೆಗೆಂದು ತೆರಳುವ ಮುನ್ನವೇ ಪರೀಕ್ಷಿಸಿ. ಬೇಕಾದಲ್ಲಿ ಇವುಗಳನ್ನು ತೆಗೆದುಕೊಂಡು ತೆರಳಿ.
- ಸಾಧ್ಯವಿದ್ದಲ್ಲಿ ಕೆಲಸಕ್ಕೆಂದು ತೆರಳುವ ಮುನ್ನವೇ ಕೋವಿಡ್ ಲಸಿಕೆಯನ್ನು ಪಡೆಯಿರಿ. ನಿಮ್ಮ ಗಮ್ಯತಾಣದಲ್ಲಿ ನಿಶ್ಚಿಂತೆಯಿಂದ ಇರಲು ಸೂಕ್ತ ಎನಿಸುವ ಲಸಿಕೆ ಮತ್ತು ರೋಗದ ಬಗೆಗಿನ ಮಾಹಿತಿಗಳು ಪರಿಷ್ಕರಿಸಲ್ಪಟ್ಟಿವೆಯೇ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಿ.
- ನಿಮ್ಮ ಪ್ರವಾಸ ವಿಮಾ ಪಾಲಿಸಿಯನ್ನು ಪರಿಶೀಲಿಸಿ. ಹಲವು ಸರ್ಕಾರಗಳು ವಿಭಿನ್ನ ರೀತಿಯ ಪ್ರವಾಸಿ ಸಲಹೆಗಳನ್ನು ನೀಡಿದ್ದು, ಅಂತರರಾಷ್ಟ್ರೀಯ ಪ್ರಯಾಣದ ವಿರುದ್ಧ ಎಚ್ಚರಿಕೆಯನ್ನೂ ನೀಡಿವೆ.ಕೋವಿಡ್- 19 ಸಂಬಂಧಿ ತೊಂದರೆಗಳಿಗೆ ಸುರಕ್ಷೆ ಪಡೆಯುವುದು ಸಾಧ್ಯವಿಲ್ಲ ಎನ್ನುವುದು ಗಮನದಲ್ಲಿರಲಿ.
- ನೀವು ಭಾಗವಹಿಸಲು ಉದ್ದೇಶಿಸಿರುವ ಸಭೆ/ ಸಮಾರಂಭಗಳ ಬಗೆಗಿನ ಸದ್ಯದ ಸ್ಥಿತಿಗತಿ ಬಗ್ಗೆ ನಿಯತವಾಗಿ ಪರಿಶೀಲಿಸುತ್ತಿರಿ. ಏಕೆಂದರೆ ಹಲವು ದೇಶಗಳು ಸಾರ್ವಜನಿಕ ಸಭೆ ಸಮಾರಂಭವನ್ನು ನಿಷೇಧಿಸಿವೆ ಹಾಗೂ ನಿರ್ದಿಷ್ಟ ಸಂಖ್ಯೆಗಿಂತ ಹೆಚ್ಚು ಮಂದಿ ಜತೆ ಸೇರುವುದನ್ನು ನಿಷೇಧಿಸಿವೆ.
- ಹಲವು ಭೂ ಗಡಿಗಳನ್ನು ವಿಶ್ವಾದ್ಯಂತ ಮುಚ್ಚಲಾಗಿದೆ. ಹೆಚ್ಚುವರಿಯಾಗು ಮುಚ್ಚುವ ಸಾಧ್ಯತೆಯೂ ಇದೆ. ನಿಮ್ಮ ತುರ್ತು ಯೋಜನೆಯಲ್ಲಿ ಇದನ್ನೂ ಪರಿಗಣಿಸಬೇಕು.
- ನೀವು ಅಸ್ವಸ್ಥರಾಗಿದ್ದಲ್ಲಿ ಪ್ರಯಾಣ ಬೇಡ. ಬಹುತೇಕ ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಮಾನ ನಿಲ್ದಾಣಗಳು ಹಾಗೂ ಇತರ ಸಾರಿಗೆ ಹಬ್‍ಗಳು ಕಟ್ಟುನಿಟ್ಟಿನ ಆರೋಗ್ಯ ತಪಾಸಣಾ ಕ್ರಮಗಳನ್ನು ಜಾರಿಗೊಳಿಸಿವೆ. ಪ್ರವಾಸಿಗರು ಇಂಥ ತಪಾಸಣೆ ಎದುರಿಸುವ ಮತ್ತು/ಅಥವಾ ಕ್ವಾರೆಂಟೈನ್/ ಸ್ವಯಂ ಪ್ರತ್ಯೇಕತೆಗೆ ಒಳಗಾಗುವ ಸಾಧ್ಯತೆ ಇದೆ.
- ಗಮವಿಡಿ: ವರದಿಗಳ ಪ್ರಕಾರ, ಅನೇಕ ವಿಮಾನ ಸಂಸ್ಥೆಗಳು ಕೋವಿಡ್-19ರಿಂದಾಗಿ ಗಂಭೀರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ. ಅದಕ್ಕಾಗಿ ಸಂಪೂರ್ಣ ರೀತಿಯಲ್ಲಿ ಮರುಪಾವತಿ ಲಭ್ಯವಿರುವ ಟಿಕೆಟ್ ಗಳನ್ನು ಖರೀದಿಸಿ)
- ನಿಮ್ಮ ಗಮ್ಯತಾಣದಲ್ಲಿ ಇತ್ತೀಚಿನ ವೀಸಾ ಸ್ಥಿತಿಗತಿ ಬಗ್ಗೆ ಪರಿಶೀಲಿಸಿಕೊಳ್ಳಿ. ಹಲವು ದೇಶಗಳು ವೀಸಾ ನೀಡುವುದನ್ನು ನಿಲ್ಲಿಸಿದ್ದು ಗಮನದಲ್ಲಿರಲಿ.
- ನೀವು ಕೋವಿಡ್-19 ಮುಕ್ತರು ಎಂದು ದೃಢೀಕರಿಸುವ ವೈದ್ಯಕೀಯ ಪ್ರಮಾಣ ಪತ್ರ ನೀವು ಭೇಟಿ ನೀಡುವ ದೇಶದಲ್ಲಿ ಅಗತ್ಯವೇ ಎಂದು ತಿಳಿದುಕೊಳ್ಳಿ.
- ನಿಮ್ಮ ಪ್ರವಾಸದ ವೇಳಾಪಟ್ಟಿ ಹೆಚ್ಚು ಸ್ಥಿತಿಸ್ಥಾಪಕತ್ವ ಹೊಂದಿರಲಿ. ವಿಶ್ವಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಆರೋಗ್ಯ ತಪಾಸಣೆ, ತಾಪಮಾನ ಮಾಪನ ಕೇಂದ್ರಗಳ ಹಿನ್ನೆಲೆಯಲ್ಲಿ ಹೆಚ್ಚುವರಿ ಸಮಯವನ್ನು ಹೊಂದಿಸಿಕೊಳ್ಳಿ. ರೈಲು ನಿಲ್ದಾಣಗಳು, ಬಂದರು/ ಡಾಕ್, ಬಸ್ ನಿಲ್ದಾಣಗಳಿಗೂ ಇದು ಅನ್ವಯಿಸುತ್ತದೆ.
ನಿಯೋಜನೆಯ ನಂತರ
- ನಿಮ್ಮ ಆರೋಗ್ಯದ ಮೇಲೆ ಯಾವಾಗಲೂ ಗಮನವಿಡಿ.
- ಅತಿ ಹೆಚ್ಚು ಅಪಾಯವಿರುವ ಸ್ಥಳದಿಂದ ಹಿಂದಿರುಗಿದ ನಂತರ, ನೀವು ಪ್ರತ್ಯೆಕವಾಗಿ ಇರಬೇಕಾಗುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಸಲಹೆಗಳನ್ನು ನೋಡಿ ತಿಳಿಯಿರಿ.
- ಕೋವಿಡ್-19 ಬಗೆಗೆ ಇತ್ತೀಚಿನ ಅಪ್‍ಡೇಟ್ ಮತ್ತು ಮಾಹಿತಿಗಳನ್ನು, ನಿಮ್ಮ ಮೂಲ ದೇಶದಲ್ಲಿ ಮತ್ತು ಗಮ್ಯ ದೇಶದಲ್ಲಿನ ಕ್ವಾರೆಂಟೈನ್ ಮತ್ತು ಐಸೊಲೇಶನ್ ಪ್ರಕ್ರಿಯೆಯನ್ನು ಪರಿಶೀಲಿಸುತ್ತಿರಿ.
- ನೀವು ಭೇಟಿ ನೀಡಿದ ದೇಶದಲ್ಲಿ ಸೋಂಕಿನ ದರವನ್ನು ಆಧರಿಸಿ, ನೀವು ವಾಪಸ್ಸಾದ ಬಳಿಕ 14 ದಿನಗಳ ಕಾಲ ನೀವು ನಿಕಟವಾಗಿ ಸಂಪರ್ಕ ಹೊಂದಿದ್ದ ವ್ಯಕ್ತಿಗಳ ಹೆಸರು/ ದೂರವಾಣಿ ಸಂಖ್ಯೆಯ ದಿನಚರಿ ನಿರ್ವಹಿಸುವುದು ಅಗತ್ಯ. ಇದು ನಿಮಗೆ ರೋಗಲಕ್ಷಣ ಕಾಣಿಸಿಕೊಂಡಲ್ಲಿ ಸಂಭಾವ್ಯ ಸಂಪರ್ಕ ಟ್ರ್ಯಾಕಿಂಗ್‍ಗೆ ಅನುಕೂಲವಾಗುತ್ತದೆ.
ನಿಮಗೆ ರೋಗಲಕ್ಷಣ ಕಾಣಿಸಿಕೊಂಡಲ್ಲಿ
- ನಿಮಗೆ ಕೋವಿಡ್-19 ರೋಗಲಕ್ಷಣ ಕಾಣಿಸಿಕೊಂಡಲ್ಲಿ, ಅದು ತೀರಾ ಸೌಮ್ಯವಾಗಿದ್ದರೂ, ನಿಮ್ಮ ಆಡಳಿತ ಮಂಡಳಿಗೆ ಮಾಹಿತಿ ನೀಡಿ ಹಾಗೂ ಅವರೊಂದಿಗೆ ಸಹಕರಿಸಿ ವಿಮಾನ ನಿಲ್ದಾಣದಿಂದ ಅಥವಾ ಇತರ ಸಂಚಾರ ಹಬ್‍ಗಳಿಂದ ಮನೆಗೆ ಕರೆದೊಯ್ಯಲು ಸೂಕ್ತ ವ್ಯವಸ್ಥೆಗೆ ಕೇಳಿಕೊಳ್ಳಿ. ಯಾವುದೇ ಕಾರಣಕ್ಕೆ ಟ್ಯಾಕ್ಸಿ ಬಳಸುವ ನಿರ್ಧಾರಕ್ಕೆ ಬರಬೇಡಿ.
- ನಿಮ್ಮನ್ನು ಕಾಪಾಡಿಕೊಳ್ಳಲು ಮತ್ತು ನಿಮ್ಮ ಸಮುದಾಯವನ್ನು ಕಾಪಾಡಲು ಡಬ್ಲ್ಯುಎಚ್‍ಓ ಮತ್ತು ಸಿಡಿಸಿ ಸಲಹೆಗಳನ್ನು ಅನುಸರಿಸಿ ಅಥವಾ ಸ್ಥಳೀಯ ಪ್ರಾಧಿಕಾರಗಳ ಸಲಹೆ ಅನುಸರಿಸಿ.
- ನಿಮಗೆ ರೋಗಲಕ್ಷಣ ಕಾಣಿಸಿಕೊಂಡ ಏಳು ದಿನಗಳ ಕಾಲ ಮನೆ ಬಿಡಬೇಡಿ. ನಿಖರವಾದ ಸಮಯವು ಸರ್ಕಾರಿ ಸೂಚನೆಗಳಂತೆ ಬದಲಾಗುತ್ತದೆ. ನೀವು ಸೋಂಕಿತರಾಗಿದ್ದ ಸಂದರ್ಭದಲ್ಲಿ ಇದು ಇತರರನ್ನು ರಕ್ಷಿಸಲು ನೀವು ನೆರವು ನೀಡಿದಂತಾಗುತ್ತದೆ.
- ನಿಗದಿತ ಯೋಜನೆ ರೂಪಿಸಿಕೊಂಡು ನೆರವಿಗಾಗಿ ಇತರರಿಗೆ ಮನವಿ ಮಾಡಿ. ನಿಮ್ಮ ಉದ್ಯೋಗದಾತರು, ಸ್ನೇಹಿತರು ಅಥವಾ ಕುಟುಂಬದವರಿಂದ ನಿಮಗೆ ಅಗತ್ಯ ವಸ್ತುಗಳು ಸರಬರಾಜು ಆಗುವಂತೆ ಕೋರಿ ಮತ್ತು ಮುಂಬಾಗಿಲ ಹೊರಗಿನಲ್ಲೇ ಅದನ್ನು ಇಡುವಂತೆ ಸೂಚಿಸಿ.
- (ನಿಮ್ಮ ಮನೆ ಮಂದಿಯಿಂದ ಸಾಧ್ಯವಾದಷ್ಟು ದೈಹಿಕ ಅಂತರವನ್ನು ಕಾಪಾಡಿಕೊಳ್ಳಿ. ಸಾಧ್ಯವಿದ್ದಲ್ಲಿ, ಪ್ರತ್ಯೇಕವಾಗಿ ಮಲಗಿ.
ಸಿಪಿಜೆಯ ಆನ್‍ಲೈನ್ ಸುರಕ್ಷಾ ಕಿಟ್, ನಾಗರಿಕ ಅಶಾಂತಿ, ಅರಾಜಕತೆ ಮತ್ತು ಚುನಾವಣೆಯ ವರದಿಗಾರಿಕೆ ಸಂದರ್ಭಕ್ಕೆ ಅಗತ್ಯವಾದ ದೈಹಿಕ, ಡಿಜಿಟಲ್, ಮಾನಸಿಕ ಸುರಕ್ಷಾ ಸಂಪನ್ಮೂಲಗಳು ಮತ್ತು ಸಾಧನಗಳ ಬಗ್ಗೆ ಪತ್ರಕರ್ತರು ಹಾಗೂ ಸುದ್ದಿಮನೆಗಳಿಗೆಮೂಲ ಸುರಕ್ಷಾ ಮಾಹಿತಿಗಳನ್ನು ಒದಗಿಸುತ್ತದೆ
[ಸಂಪಾದಕರ ಟಿಪ್ಪಣಿ: ಈ ಸಲಹೆಗಳನ್ನು ಮೂಲತಃ ಫೆಬ್ರವರಿ 10, 2020 ರಂದು ಪ್ರಕಟಿಸಲಾಯಿತು. ಇದನ್ನು ಆಗಾಗ್ಗೆ ಪರಿಷ್ಕರಿಸಲಾಗುತ್ತಿದೆ. ಮೇಲ್ಭಾಗದಲ್ಲಿ ನೀಡಿರುವ ಪ್ರಕಟಣೆಯ ದಿನಾಂಕವು ಇತ್ತೀಚಿನ ಪರಿಷ್ಕರಣಾ ದಿನಾಂಕವಾಗಿದೆ.]